Spread the love

ಧಾರವಾಡ: ಕ್ರಾಂತಿ ಪ್ರಕಾಶನದಿಂದ ಪ್ರತಿ ವರ್ಷ ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಕ್ರಾಂತಿ ಸಮ್ಮೇಳನ, ಕೋವಿಡ್ ವೇಳೆಯಲ್ಲಿ ನಿಂತು ಹೋಗಿತ್ತು. ಅದಕ್ಕೆ ಈಗ ಪುನಃ ಚಾಲನೆ ನೀಡಲಾಗಿದ್ದು, ಈ ವರ್ಷದ ಸಾಹಿತ್ಯ ಸಂಕ್ರಾಂತಿ-24ನ್ನು ಇದೇ ಭಾನುವಾರ ಜ. 28 ರಂದು ಭಾನುವಾರ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಆಯೋಜಿಸಲಾಗಿದೆ.
ಸಾಹಿತ್ಯ ಸಂಕ್ರಾಂತಿಗೆ ಪ್ರಮುಖ ಅಡಿಪಾಯವಾಗಿ ನಿಂತವರು ಹಿರಿಯ ಸಾಹಿತಿ ಡಾ. ಸಿದ್ರಾಮ ಕಾರಣಿಕ ಆದರೆ ಈಗ ಅವರು ಅಗಲಿದ್ದಾರೆ. ಅವರ ಬದುಕು ಬರಹದ ಅವಲೋಕನ ನಡೆಯಲಿದ್ದು, ಪ್ರಮುಖ ವೇದಿಕೆಗೆ ಡಾ. ಸಿದ್ರಾಮ ಕಾರಣಿಕ ವೇದಿಕೆ ಎಂದು ಹೆಸರಿಡಲಾಗಿದೆ. ಜೊತೆಗೆ, ಕೋವಿಡ್ ಸಮಯದಲ್ಲಿ ನಿಧನರಾದ ಯುವ ಸಾಹಿತಿ ಅನಿಲ ಹುಲಮನಿ, ಕವನಗಳ ಕೃತಿ ಬಿಡುಗಡೆ, ಕವಿಗೋಷ್ಠಿ ಮತ್ತು ಪುಸ್ತಕ ಪ್ರದರ್ಶನ ಸಹಿತ ಇಡೀ ದಿನ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 10ಗಂಟೆಗೆ ಸಾಹಿತ್ಯ ಸಂಕ್ರಾಂತಿಯನ್ನು ಹುಬ್ಬಳ್ಳಿ-ಧಾರವಾಡ ಕಮೀಷ್ನರೇಟ್ ವ್ಯಾಪ್ತಿಯ ಉಪ ಪೊಲೀಸ್ ಆಯುಕ್ತರಾದ ರವೀಶ ಸಿ.ಆರ್. ಉದ್ಘಾಟಿಸುವರು. ಸಾಹಿತಿ ಅಶೋಕ ಶೆಟ್ಟರ್ ಕೃತಿಗಳನ್ನು ಬಿಡುಗಡೆಗೊಳಿಸುವರು. ಸಾಹಿತಿ ಡಾ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಪತ್ರಕರ್ತರಾದ ಬಸವರಾಜ ಆನೆಗುಂದಿ, ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ್, ಸಮಾಜ ಸೇವಕ ಬಸವರಾಜ ಬೂದಿಹಾಳ, ಡಾ. ದುಂಡಪ್ಪ ನಾಂದ್ರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 11.30ಕ್ಕೆ ನಡೆಯುವ ಕವಿಗೋಷ್ಠಿಗೆ ಸಾಹಿತಿ ಸಿದ್ರಾಮ ಪಾಟೀಲ ಚಾಲನೆ ನೀಡುವರು. ರಂಗ ನಿರ್ದೇಶಕ ಗದಿಗೆಯ್ಯ ಹಿರೇಮಠ ಆಶಯ ನುಡಿ ಮಾತನಾಡುವರು. ಹಿರಿಯ ಕವಿ ಪ್ರಕಾಶ ಕಡಮೆ ಅಧ್ಯಕ್ಷತೆ ವಹಿಸುವರು. ಕವಿಯಿತ್ರಿ ಶ್ರೀದೇವಿ ಕೆರೆಮನೆ, ಡಾ. ಶಶಿಧರ ನರೇಂದ್ರ, ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡುವರು.
ಈ ಸಾಹಿತ್ಯ ಸಂಕ್ರಾಂತಿಗೆ ಸಾರ್ವಜನಿಕರು ಮತ್ತು ಸಾಹಿತ್ಯಾಸಕ್ತರಿಗೆ ಮುಕ್ತ ಅವಕಾಶವಿದ್ದು, ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ಕಾರ್ಯಕ್ರಮ ಸಂಯೋಜಕರಾದ ರಾಜಕುಮಾರ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.