Spread the love

 

*ಸರಕಾರ ನೀಡುವ ಸೇವಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ* ಎಂದು ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷರಾದ *ಟಿ.ಎಮ್.ವಿಜಯ ಭಾಸ್ಕರ* ಅಭಿಪ್ರಾಯಪಟ್ಟರು.

 

ಅವರು ಧಾರವಾಡ ಶಾಖೆಯ ಭಾರತೀಯ ಸಾರ್ವಜನಿಕ ಆಡಳಿತ ವಿಭಾಗ, ಕವಿವಿ ರಾಜ್ಯಶಾಸ್ತ್ರ ವಿಭಾಗ ಮತ್ತು ಕವಿವಿ ಸಾರ್ವಜನಿಕ ಆಡಳಿತ ವಿಭಾಗಗಳ ಸಹಯೋಗದಲ್ಲಿ ಕವಿವಿ ಮಾನಸೊಲ್ಲಾಸ ಸಭಾಂಗಣದಲ್ಲಿ ‘ *ಆಡಳಿತದಲ್ಲಿ ಜನರ ಭಾಗವಹಿಸುವಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಸುಧಾರಣೆಗಳು.’* ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

 

ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಮುಖ್ಯ . ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ ಸ್ನೇಹಿ ಆಗಿರಬೇಕು. ಆಡಳಿತದಲ್ಲಿ ಜನ ಸ್ನೇಹಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು. ಸರಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿಯನ್ನು ತಂತ್ರಜ್ಞಾನದ ಮೂಲಕ ತಪ್ಪಿಸಲು ಸಾಧ್ಯ ಎಂದ ಅವರು ನಾನು ಆಡಳಿತಾತ್ಮಕ ಸುಧಾರಣೆಯ ಆಯೋಗದ ಅಧ್ಯಕ್ಷನಾಗಿದ್ದಾಗ ಸರಕಾರಕ್ಕೆ ಆರು ವರದಿಗಳ ಮೂಲಕ ಆರು ಸಾವಿರಕ್ಕಿಂತಲೂ ಹೆಚ್ಚು ಶಿಫಾರಸ್ಸುಗಳನ್ನು ಆಡಳಿತಾತ್ಮಕ ಸುಧಾರಣೆಗೆ ಮಾಡಲಾಗಿದೆ ಎಂದರು.

 

ಈಗಾಗಲೇ ಆಡಳಿತದಲ್ಲಿ ತಂತ್ರಜ್ಞಾನವನ್ನು ಅನೇಕ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಸಕಾಲ ಮತ್ತು ಸೇವಾ ಸಿಂಧು ತಂತ್ರಾಂಶಗಳ ಮುಖಾಂತರ ಸುಲಭವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಸೇವೆಗಳನ್ನು ನೀಡಲಾಗುತ್ತದೆ ಎಂದರು. ಆಡಳಿತ ವಿಕೇಂದ್ರೀಕರಣ ದಿಂದ ಸರಳ ಆಡಳಿತ ಮಾಡಲು ಸಾಧ್ಯ. ಜನರು ಪದೇ ಪದೇ ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ ಎಂದರು.

 

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಮನ್ವಯತೆಗಾಗಿ ತಂತ್ರಜ್ಞಾನ ಸ್ನೇಹಿ ತಂತ್ರಾಂಶಗಳು ಬಹಳ ಪಾತ್ರ ವಹಿವೆ. ರಾಜ್ಯದಲ್ಲಿ ಇ-ಆಫಿಸ್, ಸೇವಾ ಸಿಂಧು, ಮೈ-ಗೌರ್ನಮೆಂಟ್, ಜಾಲತಾಣಗಳು ಬಹಳ ಉಪಯುಕ್ತವಾಗಿದೆ ಎಂದರು. ಪ್ರಸ್ತುತ ಪೇಪರ್-ಲೇಸ್ ಆಡಳಿತಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಶೇಕಡ 90 ರಷ್ಟು ಮೊಬೈಲ್ ತಂತ್ರಜ್ಞಾನ ಆಧಾರಿತ ಅಪ್ಲಿಕೇಶನಗಳನ್ನು ಆಡಳಿತದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

 

ಪ್ರೊ.ಎಸ್.ಎಸ್.ಪಟಗುಂಡಿ ಮಾತನಾಡಿ ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಆಡಳಿತಾತ್ಮಕ ಸುಧಾರಣೆ ಬಹಳ ಮುಖ್ಯವಾಗಿದೆ. ಉತ್ತಮ ಆಡಳಿತಕ್ಕೆ ತಂತ್ರಜ್ಞಾನದ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

 

ಬಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಮ್.ಎಸ್.ಸುಭಾಷ್ ಮಾತನಾಡಿ….ಜನರಿಗಾಗಿ ಸರಕಾರ ಎಂಬುದು ಬಹಳ ಮುಖ್ಯವಾಗಿದೆ. ಸರಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವದು ಪ್ರಮುಖ ಪಾತ್ರವಹಿಸುತ್ತದೆ ಎಂದರು.

ತಾಂತ್ರಿಕ ಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆಯು ಜಿ.ಸಿ‌.ತಲ್ಲೂರ, ಧಾರವಾಡದ ಐಐಟಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ರಾಜೇಶ ಹೆಗಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಸ್.ಟಿ.ಬಾಗಲಕೋಟಿ, ಬೆಳಗಾವಿಯ ಉದ್ಯಮಿ ಡಾ.ನಿತಿನ್ ಖೋತ್, ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಚಿನ್ಮಯಾನಂದ, ಕವಿವಿ ಭೌತಶಾಸ್ತ್ರ ವಿಭಾಗದ ಅಡ್ಜಂಟ್ ಪ್ರೊಫೆಸರ್ ಡಾ.ಜಗದೀಶ್ ಟೋನಣ್ಣವರ ಅವರು ಆಡಳಿತಾತ್ಮಕ ಸುಧಾರಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.

 

ಕಾರ್ಯಕ್ರಮದಲ್ಲಿ ಕವಿವಿ ರಾಜ್ಯಶಾಸ್ತ್ರ ಮುಖ್ಯಸ್ಥ ಡಾ.ಬಿ.ಎಂ.ರತ್ನಾಕರ್, ಡಾ.ವಿಜಯಕುಮಾರ್ ಬೇಟಗಾರ, ಪ್ರೊ.ಎಮ್.ಜಿ.ಖಾನ್, ಡಾ.ಎಂ.ಬಿ.ದಳಪತಿ. ಡಾ.ಎನ್.ಆರ್.ಬಾಳಿಕಾಯಿ, ಡಾ.ಲಕ್ಷ್ಮಣ, ಡಾ.ಪೊಲಿಸ್ ಪಾಟೀಲ, ಡಾ.ಜಗದೀಶಗೌಡ, ಡಾ.ಆರ್.ಎನ್.ಮರೇಪ್ಪಗೌಡರ, ಡಾ.ಬಸಪ್ಪ ಅಥಣಿ, ಸೇರಿದಂತೆ ಸಂಶೋಧಕರು ವಿದ್ಯಾರ್ಥಿಗಳು ಹಾಜರಿದ್ದರು.