Spread the love

ಈ ದೇಶದ ಜನರು ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವದು ಇಂದಿನ ಅವಶ್ಯಕತೆ ಇದೆ ಎಂದು ಹಿರಿಯ ನಿವೃತ್ತ ಕೆ.ಎ.ಎಸ್ ಅಧಿಕಾರಿ ಡಾ. ವಿಜಯಕುಮಾರ ತೋರಗಲ್ ಅಭಿಪ್ರಾಯ ಪಟ್ಟರು.

 

ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ರಾಜ್ಯಶಾಸ್ತ ವಿಭಾಗ “ಸಂವಿಧಾನ ಜಾಗ್ರತಿ ಅಭಿಯಾನದ ಅಂಗವಾಗಿ ಭಾರತದಲ್ಲಿ ಸಂವಿಧಾನದ ನೈತಿಕತೆಯ ಪರಿಣಾಮಗಳು  ಎಂಬ ವಿಷಯದ ಕುರಿತುಆಯೋಜಿಸಿದ ಡಾ.ವಿ.ಟಿ.ಪಾಟೀಲ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

 

ಭಾರತದ ಸಂವಿಧಾನ ಜಗತ್ತಿಗೆ ಮಾದರಿದಾಯಕ ಸಂವಿಧಾನವಾಗಿದ್ದು, ಸಂವಿಧಾನದ ಆಶಯಗಳನ್ನು ಜನರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯಿದೆ. ಸಂವಿಧಾನ ಜನರ ಬದುಕಿಗೆ ದಾರಿದೀಪವಾಗಿದ್ದು ಜನರು ಸಂವಿಧಾನದ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಸಂವಿಧಾನದ ನೈತಿಕತೆಯು ಜನರ ಹಕ್ಕುಗಳು,ಕರ್ತವ್ಯಗಳನ್ನು ತಿಳಿಸುತ್ತದೆ. ಸರ್ಕಾರದ ಮೂರು ಅಂಗಗಳು ಸಂವಿಧಾನದ ಪ್ರಕಾರವೇ ಕಾರ್ಯನಿರ್ವಹಿಸುತ್ತವೆ. ಸಂವಿಧಾನವೇ ಸತ್ಯ, ಸಂವಿಧಾನವೇ ನಿತ್ಯ ಎಂಬುದು ರೂಢಿಯಾಗಬೇಕು.

 

ಸಂವಿಧಾನಿಕ ನೈತಿಕತೆಯ ಅನುಪಸ್ಥಿತಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜನತೆ ಸಂವಿಧಾನವನ್ನು ಗೌರವಿಸುವದನ್ನು ಕಲಿಯಬೇಕು ಅಂದಾಗ ಮಾತ್ರ ಪರಿಪೂರ್ಣವಾದ ಸಮಾಜವನ್ನು ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.

 

ಹಿರಿಯ ಪ್ರಾದ್ಯಾಪಕ ಡಾ. ಎಮ್.ಜಿ.ಖಾನ ಮಾತನಾಡಿ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಮಾನತೆಯನ್ನು ತರುವಲ್ಲಿ ಸಂವಿಧಾನ ನಿರ್ಮಾಪಕರ ಕೊಡುಗೆ ಬಹಳ ಇದೆ ಎಂದ ಅವರು ಸಂವಿಧಾನವನ್ನು ಅಧ್ಯಯನ ಮಾಡುವದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಿದೆ ಎಂದರು.

 

ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಂ.ರತ್ನಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಉಪನ್ಯಾಸಕರಾದ ಡಾ. ಬಸಪ್ಪ ಅಥಣಿ ಡಾ.ಜಗದೀಶ ಗೌಡ್, ಡಾ.ಆರ್.ಎನ್.ಎಂ.ಗೌಡರ್, ಡಾ.ದಶರಥ ಸಿಂಘೆ ಕಾರ್ಯಕ್ರಮದಲ್ಲಿ ಹಾಜರ ಇದ್ದರು. ವಿಭಾಗದ ಉಪನ್ಯಾಸಕ ಡಾ.ಲಕ್ಷ್ಮಣ. ಬಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಣವ ಕರಜಗೀಮಠ ವಂದಿಸಿದರು