Spread the love

ಧಾರವಾಡ:- ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ಪ್ರಕ್ರಿಯೆಯನ್ನು ಕೈಬಿಡಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ ರೂ.15,000 ನಿಗದಿ ಮಾಡಲು ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹಮ್ಮಿಕೊಳ್ಳಾಗಿದೆ.

ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಇದೇ ದಿ.13 ಹಾಗೂ 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂದೆ ಪೋಸ್ಷರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, 8 ವರ್ಷಗಳ ಹಿಂದೆ ರಾಜ್ಯ ಸರ್ಕಾರ, ಜಾರಿಗೊಳಿಸಿದ ಆರ್.ಸಿ.ಹೆಚ್ ಪೋರ್ಟಲ್‍ಗೆ ಲಿಂಕ್ ಮಾಡಿದ್ದು ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿದೆ. ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಶೇ.25-30ರಷ್ಟು ಅಂದರೆ 10,000 ರಿಂದ 12,000 ಆಶಾಗಳು ಆರ್.ಸಿ.ಹೆಚ್ ಪೋರ್ಟಲ್‍ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ. ಆಶಾಗಳು ಕಷ್ಟಪಟ್ಟುದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣಎಲ್ಲಿ ಹೋಗುತ್ತಿದೆ?ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ.ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ, ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ.ಸಾಕಷ್ಟು ದಾಖಲೆಗಳನ್ನ ಸಹ ಸಂಘವು ನೀಡಿದೆ.ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‍ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿಧೋರಣೆನ್ನು ಮುಂದುವರೆಸಿದೆ.‘ಮೂಗಿಗೆ ತುಪ್ಪ ಸವರಿದಂತೆ’ ಕೆಲವು ಪರಿಹಾರ ನೀಡಲುಆರೋಗ್ಯ ಇಲಾಖೆ ಮುಂದಾಯಿತೆ ಹೊರತು, ಸಮಸ್ಯೆಗಳ ಆಳಕ್ಕೆ ಇಳಿಯಲೇ ಇಲ್ಲ. ಈ ಮೂಲಕ ಆರೋಗ್ಯ ಇಲಾಖೆ ಸುಮ್ಮನೆ ಕಾಲಹರಣ ಮಾಡಿದೆಯೇ ಹೊರತು, ಬೇರೆ ಏನು ಸಾಧನೆಗೈಯಲಿಲ್ಲ ಎಂದರು.
ಈ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವೆಂದರೆ ಆಶಾಗಳ ವೇತನ ಪಾವತಿ ಪ್ರಕ್ರಿಯೆಯನ್ನು ಆರ್.ಸಿ.ಹೆಚ್ ಪೋರ್ಟಲ್ ನಿಂದ ಡಿ-ಲಿಂಕ್ ಮಾಡುವುದು. ಈ ಹಿನ್ನಲೆಯಲ್ಲಿ, ಈ ಬೇಡಿಕೆಯ ಜೊತೆಗೆ ರೂ.15,000 ನಿಶ್ಚಿತ ವೇತನ ನೀಡುವಂತೆ, ಇನ್ನಿತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲ ಆಶಾ ಸೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಕರೆ ನೀಡುತ್ತದೆ. ಹಾಗೆಯೇ ಜನತೆ ಕೂಡ ಎಲ್ಲಾ ರೀತಿಯ ಬೆಂಬಲ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಸ್ನಪ್ನಾ ಸುಳ್ಳದ,ರಾಧಾ ವೀರಕರ, ರೂಪಾ ಅನಂತಪುರ,ಸುಜಾತಾ ಮಡ್ಡಿ, ಬಸಮ್ಮ ಅಕ್ಕಮರಡಿ, ಲತಾ ಗೋಳಿ,ಚೈತ್ರಾ ಬಟ್ಟೂರ, ರಜಿಯಾ ಜವಳಿ,ರಾಜೇಶ್ವರಿ ಬೂದಪ್ಪನವರ,ಮಹೇಶ್ವರಿ ಕಿತ್ತೂರ ಇನ್ನೂ ಮುಂತಾದವರು ಇದ್ದರು.