Spread the love

ಧಾರವಾಡ : ಹಿಜಾಬ್‌ ಹಾಗೂ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಧರ್ಮ ದಂಗಲ್‌ ಎಂಬ ಪದ ಬಳಸುತ್ತಿವೆ. ಅದು ದಂಗಲ್‌ ಹೇಗೆ ಆಗುತ್ತದೆ. ಸಿಎಂ ಹೇಳಿದ್ದು ಕಾನೂನಾತ್ಮಕವಾಗಿ ಇದೆ. ಅದಕ್ಕೆ ದಂಗಲ್‌ ಎಂಬ ಪದ ಬಳಸಿ ಏಕೆ ಹೇಳುತ್ತಿರಿ ಎಂದು ಮಾಧ್ಯಮಗಳ ಮೇಲೆ ಸಚಿವ ಸಂತೋಷ ಲಾಡ್‌ ಹರಿಹಾಯ್ದು ಗರಂರಾದರು.

ಹಿಜಾಬ್‌ ನಿಷೇಧ ಆದೇಶ ವಾಪಸ್‌ ಪಡೆಯುವ ಬಗ್ಗೆ ಸಿಎಂ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ ಲಾಡ್‌ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ಧರ್ಮ ದಂಗಲ್‌ ಎಂದರೇನು ? ಅದರಲ್ಲಿ ಧರ್ಮ ದಂಗಲ್‌ ಏನಾಗಿದೆ ? ಪದೇ ಪದೇ ಮಾಧ್ಯಮಗಳು ಧರ್ಮ ದಂಗಲ್‌ ಎಂಬ ಪದ ಬಳಸುತ್ತಿವೆ. ಇದು ಎಷ್ಟು ಸರಿ ? ಕಾನೂನಾತ್ಮಕ,ಸಂವಿಧಾನಾತ್ಮಕವಾಗಿ ಆದೇಶ ವಾಪಸ್‌ ಪಡೆಯಲು ಅವಕಾಶವಿದೆ. ಅದರಲ್ಲಿ ಸಿಎಂ ತಪ್ಪೇನಿದೆ ?ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ.

ನಾನೂ ಒಬ್ಬ ಹಿಂದೂ ಅಲ್ಲವಾ ? ನಾನೇನು ಅದಕ್ಕೆ ವಿರೋಧ ಮಾಡುತ್ತಿಲ್ಲ. ಮಾಧ್ಯಮದಲ್ಲೂ ಹಿಂದೂಗಳಿದ್ದಾರೆ ಅವರೂ ವಿರೋಧ ಮಾಡುತ್ತಾರಾ ? ನಿಮ್ಮ ನಿಲುವು ಏನು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಮುಸ್ಲಿಂ ತುಷ್ಟಿಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದವರು ಮುಸ್ಲಿಂ ತುಷ್ಟಿಕರಣ ಎಂಬುದು ವಿರೋದ ಪಕ್ಷಗಳ ದೃಷ್ಟಿಕೋನ ಆಗಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಎಂದರೇನು ? ಹಿಂದೂ, ಮುಸ್ಲಿಂ,ಸಿಖ್‌,ಬುದ್ಧ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತೇವೆ ಎಂಬುದಲ್ಲವೇ ? ಎಂದರು.

ಹಿಜಾಬ್‌ ನಿಷೇಧ ವಾಪಸ್‌ ಸೇರಿದಂತೆ ಇತರೆ ನಿಯಮಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದರು. ಸಂವಿಧಾನ ಬದ್ಧವಾಗಿ ಯಾವ ರೀತಿ ಇರಬೇಕು ಅಂತಿದೆಯೋ ಅದೇ ರೀತಿ ಮಾಡುತ್ತಾರೆ. ಅದೇ ರೀತಿಯಲ್ಲಿ ಮಾಡಲು ಸಿಎಂ ಪರಿಶೀಲಿಸುತ್ತಿದ್ದಾರೆ ಎಂದರು.